ಬೆಂಗಳೂರು,ಮಾರ್ಚ್ 8: ಚಿತ್ರನಟಿಯೊಂದಿಗೆ ರತಿ ಕ್ರೀಡೆ ನಡೆಸಿ ಸಾರ್ವಜನಿಕವಾಗಿ ಮಾನ ಮರ್ಯಾದೆ ಹರಾಜು ಹಾಕಿಸಿಕೊಂಡಿರುವ ಧ್ಯಾನ ಪೀಠದ ನಿತ್ಯಾನಂದ ಸ್ವಾಮೀಜಿ ಮುರ್‍ನಾಲ್ಕು ದಿನಗಳಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡು ತಮ್ಮ ಮೇಲಿನ ಆರೋಪಗಳಿಗೆ ಉತ್ತರ ನೀಡಲಿದ್ದಾರೆ ಎಂದು ಧ್ಯಾನ ಪೀಠದ ಕಿರಿಯ ಸ್ವಾಮೀಜಿ ಹಾಗೂ ರಾಸಲೀಲೆ Sತಿಯ ನಿತ್ಯಾನಂದ ಸ್ವಾಮೀಜಿಯ ಆಪ್ತ ಶಿಷ್ಯ ಸಚ್ಚಿದಾನಂದ ಸ್ವಾಮಿ ಹೇಳಿದ್ದಾರೆ.
ನಿತ್ಯಾನಂದ ಸ್ವಾಮಿ ರಾಸಲೀಲೆ ಪ್ರಕರಣ ಹೊರ ಬಂದ ನಂತರ ಇದೇ ಮೊದಲ ಬಾರಿಗೆ ಬಿಡದಿಯ ಧ್ಯಾನ ಪೀಠ ಆಶ್ರಮದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಗುರುಗಳು ಯಾವುದೇ ತಪ್ಪು ಮಾಡಿಲ್ಲ. ಎಲ್ಲದಕ್ಕೂ ಅವರೇ ಭಕ್ತರ ಮುಂದೆ ಕಾಣಿಸಿಕೊಂಡು ಉತ್ತರ ಹೇಳುತ್ತಾರೆ ಎಂದು ಸ್ಪಷ್ಟಪಡಿಸಿದರು.
ನಿತ್ಯಾನಂದ ಸ್ವಾಮೀಜಿಯ ರಾಸಲೀಲೆಗಳ ಬಗ್ಗೆ ಯಾವುದೇ ಸ್ಪಷ್ಟ ಉತ್ತರ ನೀಡದ ಅವರು, ಎಲ್ಲದಕ್ಕೂ ಇನ್ನು ಮುರ್‍ನಾಲ್ಕು ದಿನಗಳಲ್ಲಿ ಸ್ವಾಮೀಜಿಯೇ ಖುದ್ದಾಗಿ ಉತ್ತರ ಕೊಡಲಿದ್ದಾರೆ. ಹಾಗಾಗಿ ಈ ಬಗ್ಗೆ ಹೆಚ್ಚು ಏನನ್ನೂ ಹೇಳುವುದಿಲ್ಲ ಎಂದರು.
ಚನ್ನೈನ ಆಶ್ರಮದಲ್ಲಿ ಎರಡು ಸಾವು ಸಂಭವಿಸಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಧ್ಯಮಗಳಲ್ಲಿ ಬಂದಿರುವ ವರದಿಗಳಿಗೆ ಸ್ಪಷ್ಟನೆ ನೀಡಲು ಸುದ್ದಿಗೋಷ್ಠಿ ಕರೆದಿದ್ದಾಗಿ ಹೇಳಿದ ಅವರು, ಈ ಸಾವುಗಳು ಆಕಸ್ಮಿಕ. ಈ ಕುರಿತ ಎಲ್ಲಾ ದಾಖಲಾತಿಗಳನ್ನು ಪ್ರದರ್ಶಿಸಿ ಆಶ್ರಮದಲ್ಲಿ ಯಾವುದೇ ನಿಗೂಢ ಸಾವಿನ ಪ್ರಕರಣ ನಡೆದಿಲ್ಲ ಎಂದು ತಿಳಿಸಿದರು.
ಈ ಸ್ಪಷ್ಟೀಕರಣ ಹೊರತುಪಡಿಸಿ ಸುದ್ದಿಗಾರರ ಹಲವು ಪ್ರಶ್ನೆಗಳಿಗೆ ಯಾವುದೇ ಉತ್ತರ ನೀಡದೇ ಎಲ್ಲದಕ್ಕೂ ನಿತ್ಯಾನಂದ ಸ್ವಾಮೀಜಿಯ ಹೆಸರು ಹೇಳಿ ಜಾರಿಕೊಂಡರು.
ಬೆಂಗಳೂರಿನಿಂದ ವಿದ್ಯುನ್ಮಾನ ಮಾಧ್ಯಮ ಸೇರಿದಂತೆ ಭಾರೀ ಸಂಖ್ಯೆಯಲ್ಲಿ ಆಶ್ರಮಕ್ಕೆ ತೆರಳಿದ್ದ ಮಾಧ್ಯಮ ಮಿತ್ರರು ನಿತ್ಯಾನಂದ ಸ್ವಾಮೀಜಿ ರಾಸಲೀಲೆ ಬಗ್ಗೆ ಕೆಲ ಸ್ಪಷ್ಟೀಕರಣ ಸಿಗಬಹುದು ಎಂದುಕೊಂಡಿದ್ದರು. ಆದರೆ ಅವರ ನೆಚ್ಚಿನ ಶಿಷ್ಯ ಆ ಬಗ್ಗೆ ಮಾಹಿತಿ ನೀಡದೇ ಎಲ್ಲರನ್ನೂ ನಿರಾಶೆಗೊಳಿಸಿದರು.